‘ಮಾಲ್ಗುಡಿ ಡೇಸ್ ಒಂದು ನೆನಪು...
‘ತಾನಾನ ತನಾ ನನಾನಾ... ತಾನಾನ ತನಾ ನನಾನಾ...’ ಈ ಸಂಗೀತ ಕೇಳ್ತಿದ್ದಂಗೇ ಎಲ್ಲರಿಗೂ ನೆನಪಿಗೆ ಬರೋದು ‘ಮಾಲ್ಗುಡಿ ಡೇಸ್ ಇದೊಂದು ಲೆಜೆಂಡ್. ಈ ಧಾರಾವಾಹಿಯ ಒಂದೊಂದು ಎಪಿಸೋಡುಗಳು ಮನಸಿಗೆ ಮುದ ನೀಡುತ್ತವೆ.ಏನೋ ಒಂದು ರಿಲ್ಯಾಕ್ಸ್. ಮಾಲ್ಗುಡಿ ಇದು ಎಷ್ಟೋ ಜನರಲ್ಲಿ ಅದೆಷ್ಟು ಆಕರ್ಷಿಸಿತ್ತಿಂದರೆ ಈಗಲೂ ಎಷ್ಟೋ ಜನ ಎಲ್ಲಿದೆ ಅದು ಮಾಲ್ಗುಡಿ ಅನ್ನೋ ಊರು ಅಲ್ಲಿಗೆ ನಾವು ಒಮ್ಮೆ ಹೋಗಿ ಬರಬೇಕು ಅಂತಾರೆ. ಕೇವಲ ಕಲ್ಪನೆಯಲ್ಲೇ ಒಂದು ಇಡೀ ಊರನ್ನೇ ಸೃಷ್ಟಿಸಿದ ಹೆಗ್ಗಳಿಗೆ ಆರ್. ಕೆ. ನಾರಾಯಣ್‌ರದ್ದು, ಇವರ ಸಣ್ಣ ಕಥೆಗಳ ಸಂಕಲನದಿಂದ ಮೂಡಿ ಬಂದ ಈ ‘ಮಾಲ್ಗುಡಿ ಡೇಸ್ನ ಪಾತ್ರಗಳೂ ಸಹ ಕಲ್ಪನೆಯ ಈ ಊರಿಗೆ ಜೀವ ತುಂಬಿದೆಯೆಂದರೆ ಅದಕ್ಕೆ ಕಾರಣ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಶಂಕರ್ ನಾಗ್. ಎಲ್. ವೈಧ್ಯನಾಥನ್‌ರ ಸಂಗೀತದಲ್ಲಿ, ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್‌ರ ಸ್ಕೆಚ್‌ಗಳು, ಟಿ.ಎಸ್ ನರಸಿಂಹನ್‌ರವರ ನಿರ್ಮಾಣದಲ್ಲಿ ೧೯೮೬ರಲ್ಲಿ ಮೂಡಿ ಬಂದ ಈ ಧಾರಾವಾಹಿಯ ಎಲ್ಲಾ ಪಾತ್ರಗಳಿಗೆ ಜೀವ ತಳೆದದ್ದು ಶಿವಮೊಗ್ಗದ ಆಗುಂಬೆಯಲ್ಲಿ, ಧಾರಾವಾಹಿಯಲ್ಲಿನ ದೊಡ್ಡಮನೆ ಇದು ಈಗಲೂ ಪ್ರಚಲಿತವಾಗಿದೆ. ಮಾಸ್ಟರ್ ಮಂಜುನಾಥ್ ಎಂಬ ಬಾಲ ಪ್ರತಿಭೆಯನ್ನು ಕಿರುತೆರೆಗೆ ಶಂಕರ್ ನಾಗ್ ಪರಿಚಯಿಸಿದ್ದು ಇದೇ ‘ಮಾಲ್ಗುಡಿ ಡೇಸ್ನಿಂದಲೇ ಹೀಗೇ ‘ಮಾಲ್ಗುಡಿ ಡೇಸ್ ಒಂದು ನೆನಪು.
‘ಮಾಲ್ಗುಡಿ ಡೇಸ್’ ಲೇಖಕ ಆರ್. ಕೆ. ನಾರಾಯಣ್
ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ ಪ್ರಸಿದ್ಧ ಕಾದಂಬರಿಕಾರರು. ಸರಳ ಸಣ್ನ ಕಥೆಗಳಿಂದಲೆ ಮನೆ ಮಾತಾದವರು. ಇವರ ಮೊದಲ ಕಾದಂಬರಿ ‘ಸ್ವಾಮಿ ಅಂಡ್ ಫ್ರೆಂಡ್ಸ್. ಯಾರೂ ಇದನ್ನ ಪ್ರಕಟಿಸಲು ಬರದಿದ್ದಾಗ ಬ್ರಿಟೀಷ್ ಲೇಖಕ ಗ್ರಹಾಂ ಗ್ರೀನ್‌ರವರು ಈ ಕಾದಂಬರಿ ಓದಿ ಆವರು ಪ್ರಕಟಿಸಿಸಲು ಮುಂದಾದರು ಅಂದಿನಿಂದ ಇವರಿಬ್ಬರೂ ಆತ್ಮೀಯರಾದರು. ‘ಸ್ವಾಮಿ ಅಂಡ್ ಫ್ರೆಂಡ್ಸ್ ಇದು ಕೂಡಾ ‘ಮಾಲ್ಗುಡಿ ಡೇಸ್ನ ಎಪಿಸೋಡುಗಳಿಗೆ ಕಥೆಯಾಗಿದೆ. ನಂತರದ ಅನೇಕ ಕಾದಂಬರಿಗಳು ಈ ಮಾಲ್ಗುಡಿಯ ಕಲ್ಪನೆಯಲ್ಲೇ ಮೂಡಿ ಬಂದವು. ಅವುಗಳಲ್ಲಿನ ಹಾಸ್ಯ, ಸರಳ ವಿಚಾರಗಳು ಮನ ಮುಟ್ಟುತ್ತವೆ. ನಾರಾಯಣ್‌ರವರ ಸ್ವಾಮಿ ಅಂಡ್ ಫ್ರೆಡ್ಸ್, ದಿ ವೆಂಡರ್ ಆಫ್ ಸ್ವಿಟ್ಸ್, ಹಾಗೂ ಎ ಹಾರ್ಸ್ ಆಂಡ್ ಟೂ ಗೋಟ್ಸ್ ಮತ್ತು ‘ಮಾಲ್ಗುಡಿ ಡೇಸ್ ನ ಕಥೆಗಳೇ ಈ ‘ಮಾಲ್ಗುಡಿ ಡೇಸ್ ಎಂಬ ಧಾರಾವಾಹಿಯಾಗಿ ದೂರದರ್ಶನದಲ್ಲಿ ಮೂಡಿಬಂದಿದೆ.
‘ಮಾಲ್ಗುಡಿ ಡೇಸ್ ನಿರ್ದೇಶಕ ಶಂಕರ್ ನಾಗ್
ಶಂಕರ್ ನಾಗ್ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಆಗಿನ ಕಾಲದಲ್ಲೇ ಅತ್ಯಂತ ಕ್ರಿಯೇಟಿವ್ ವ್ಯಕ್ತಿ ನಮ್ಮ ಶಂಕರ್ ನಾಗ್ ಎಂದರೆ ತಪ್ಪಾಗಲಾರದು. ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಸುಮಾರು ೧೨ ವರ್ಷಗಳ ಕಾಲ ಕನ್ನಡದ ೯೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಶಂಕರ್ ನಾಗ್ ಆಟೋ ರಾಜಾ ಎಂದೇ ಜನಜನಿತರಾದರು. ಮಿಂಚಿನ ಓಟ, ಗೀತಾ, ಆಕ್ಸಿಂಡೆಂಟ್, ಜನ್ಮಜನ್ಮದ ಅನುಬಂಧ, ನೋಡಿ ಸ್ವಾಮಿ ನಾವಿರೋದೇ ಹೀಗೆ ಚಿತ್ರಗಳಲ್ಲಿ ತಮ್ಮ ನಿರ್ದೇಶನದ ನೈಪುಣ್ಯತೆ ತೋರಿಸಿದ್ದಾರೆ ನಮ್ಮ ಶಂಕರ್ ನಾಗ್. ಇನ್ನು ಆರ್. ಕೆ. ನಾರಾಯಣ್ ರವರ ‘ಮಾಲ್ಗುಡಿ ಡೇಸ್ ಕಥೆಗಳನ್ನು ಧಾರಾವಾಹಿ ರೂಪದಲ್ಲಿ ತಂದು ದಿನ ನಿತ್ಯದ ಸಾಮಾನ್ಯ ಬದುಕಿನ ಚಿತ್ರಣವನ್ನು ನಮ್ಮ ಮುಂದೆ ಇಟ್ಟರು. ‘ಸತ್ ಮೇಲೆ ಮಲಗೋದು ಇದ್ದೇ ಇದೆ ಬದುಕಿದ್ದಾಗ ಒಂಚೂರು ಕೆಲಸ ಮಾಡಿ ಇದು ಶಂಕರ್ ನಾಗ್ ರವರ ಡೈಲಾಗ್.. ಎಷ್ಟು ಅರ್ಥ ಪೂರ್ಣವಾಗಿದೆ ನೋಡಿ. ಇವರ ಬಗ್ಗೆ ಎಷ್ಟು ಬರೆದರೂ ಅದು ಕಡಿಮೇನೆ. ಶಂಕರ್ ನಾಗ್‌ರ ಕ್ರಿಯೇಟೀವ್ ಯೋಜನೆ-ಯೋಚನೆಗಳನ್ನು ಹೆಚ್ಚು ದಿನ ನಾವು ಕಾಣಲಾಗಲಿಲ್ಲ. ೩೦ ಸೆಪ್ಟಂಬರ್ ೧೯೯೦ ರಂದು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತಕ್ಕೀಡಾಗಿ ನಮ್ಮನ್ನಗಲಿದರು.
‘ಮಾಲ್ಗುಡಿ ಡೇಸ್ನ ಸ್ವಾಮಿ ಮನೆ ದೊಡ್ಡಮನೆ ಬಗ್ಗೆ ಒಂದಿಷ್ಟು
ಆಗುಂಬೆಯಲ್ಲಿ ಯಾರ ಹತ್ತಿರ ಕೇಳಿದರೂ ತಕ್ಷಣ ಅಲ್ಲಿನ ಜನರು ಸಲೀಸಾಗೇ ದಾರಿ ತೋರಿಸುತ್ತಾರೆ. ಬಸ್ ನಿಲ್ದಾಣದಿಂದ ಕೆಲವೇ ಕೆಲವು ಕಾಲ್ನಡಿಯಲ್ಲೇ ಇರುವ ಈ ದೊಡ್ಡ ಮನೆಯಲ್ಲಿ ಮಾಲ್ಡುಡಿ ಡೇಸ್‌ನ ಬಹುತೇಕ ಎಪಿಸೋಡ್‌ಗಳು ಚಿತ್ರೀಕರಣಗೊಂಡಿದೆ. ಈ ಮನೆ ಸುಮರು ೧೧೫ ವರ್ಷಗಳಾಗಿರಬಹುದು. ಈ ಮನೆ ಮೊದಲು ಮೂರು ಅಂತಸ್ತಿನದ್ದಾಗಿತ್ತಂತೆ ಒಮ್ಮೆ ಸರ್. ಎಂ. ವಿಶ್ವೇಶ್ವರಯ್ಯ ಇಲ್ಲಿಗೆ ಬೇಟಿಕೊಟ್ಟಾಗ ಅವರು ಗಮನಿಸಿ ಒಂದು ಅಂತಸ್ತು ತೆಗಿರಿ ಅಂದಾಗ ಮನೆಯವರು ಅವರ ಮಾತಿನಂತೆ ಎರಡು ಅಂತಸ್ತಿಗೆ ಬದಲಾಯಿಸಿದರಂತೆ. ಎಷ್ಟೇ ಆದರೂ ಪ್ರಸಿದ್ಧ ಇಂಜಿನಿಯರ್ ಹೇಳಿದ್ದಲ್ವಾ? ಅವರ ಮಾತು ಕೇಳದೇ ಇರೋಕೆ ಆಗುತ್ತ?. ಕರಿಯ ಕಲ್ಲಿನಲ್ಲಿ ಕಟ್ಟಿರುವ ಈ ಮನೆಯ ಕಿಟಕಿ ಬಾಗಿಲುಗಳೇ ವೈಶಿಷ್ಟ. ನಾಲ್ಕು ಅಡುಗೆ ಮನೆ, ಮನೆಯ ಸುತ್ತಲೂ ಪಡಸಾಲೆ. ಮೂರು ಭಾವಿಯನ್ನು ಹೊಂದಿರುವ ದೊಡ್ಮನೆಯಲ್ಲಿ ಒಟ್ಟು ೭೦ಕ್ಕೂ ಹೆಚ್ಚು ಕೋಣೆಗಳಿವೆಯಂತೆ ಎಂಥ ಆಶ್ವರ್ಯವಲ್ಲವೇ? ಸಂಪೂರ್ಣ ಮರದಕೆತ್ತನೆಯನ್ನು ಹೊಂದಿರುವ ಈ ಮನೆ ನಿಜಕ್ಕೂ ನೋಡಲು ಸುಂದರ ಮನೆ. ಈ ಮನೆಯಲ್ಲಿ ‘ಮಾಲ್ಗುಡಿ ಡೇಸ್ ಅಲ್ಲದೇ ವಿಕ್ರಂ ಬೇತಾಳ್ ಧಾರಾವಾಹಿಯೂ ಚಿತ್ರೀಕರಣಗೊಂಡಿದೆ. ಅಷ್ಟೇ ಅಲ್ಲದೇ ಈ ಮನೆಯನ್ನು ಸೂದೀಪ್‌ರ ಮೈ ಆಟೋಗ್ರಾಫ್ ಚಿತ್ರೀಕರಣದಲ್ಲಿ ಬಳಸಲಾಗಿದೆ. ಈಗ ಇದು ವೀಕೆಂಡ್ ಕರ್ಚರ್‌ನ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಮನೆಯಾಗಿದೆ. ಕಸ್ತೂರಿ ಅಕ್ಕನ ಈ ದೊಡ್ದಮನೆಯ ಊಟಊ ವಿಶೇಷ. ಶಂಕರ್ ನಾಗ್ ಈ ಮನೆಯವರಿಗೆ ಎಷ್ಟು ಆತ್ಮೀಯರಾಗಿದ್ದರೆನ್ನುದಕ್ಕೆ ಧಾರಾವಾಹಿಯ ಒಂದು ಎಪಿಸೋಡಿನಲ್ಲಿ ಕಸ್ತೂರಿ ಅಕ್ಕನ ಮನೆಯವರು ಮತ್ತು ಸಾಕು ಪ್ರಾಣಿಗಳನ್ನು ಬಳಸಿದ್ದು ನೆನಪಿನಲ್ಲಿಡಬೇಕಾದ ವಿಷಯ.
ಮಾಲ್ಗುಡಿ ಡೇಸ್ನ ಪ್ರಮುಖ ಪಾತ್ರಗಳು ಸ್ವಾಮಿನಾಥನ್ (ಸ್ವಾಮಿ) - ಮಾಸ್ಟರ್ ಮಂಜುನಾಥ್ ಸ್ವಾಮಿನಾಥನ್ ತಂದೆ (ಮನೆಯೊಡೆಯ) - ಗಿರೀಶ್ ಕಾರ್ನಾಡ್ ಸ್ವಾಮಿನಾಥನ್ ತಾಯಿ - ವೈಶಾಲಿ ಕಾಸರವಳ್ಳಿ ಸ್ವಾಮಿ (ಚಾಮಿ) ಅಜ್ಜಿ - ಬಿ. ಜಯಶ್ರೀ ಮುನಿಯ - ಕಂಟೀ ಮಡಿಯ ಮುನಿಯನ ಹೆಂಡತಿ - ಬಿ. ಜಯಶ್ರೀ ಇನ್ನು ಅನಂತ ನಾಗ್, ಶಂಕರ್ ನಾಗ್, ಅರುಂದತಿ ನಾಗ್, ರಮೇಶ್ ಭಟ್, ಟೆಡ್ಡಿ ವೈಟ್, ರಘುರಾಂ ಸೀತಾರಾಂ ಇವರೆಲ್ಲ ನಟಿಸಿದ್ದಲ್ಲದೇ ಹದಿನೆಂಟನೆ ಎಪಿಸೋಡ್‌ನಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟಿಸಿರುವುದು ವಿಶೇಷ.
ಮಾಲ್ಗುಡಿ ಡೇಸ್ನ ಮೊದಲ ಎಪಿಸೊಡ್
‘ಎ ಹೀರೋ- ಸ್ವಾಮಿ ಒಬ್ಬ ಚಿಕ್ಕ ಹುಡುಗ. ಮಾಲ್ಗುಡಿಯಲ್ಲಿ ತನ್ನ ಅಪ್ಪ-ಅಮ್ಮ ಮತ್ತು ಅಜ್ಜಿಯೊಂದಿಗೆ ಇರ್ತಾನೆ. ತನ್ನ ಸಾಹಸದ ಕಥೆಗಳನ್ನು ಅಜ್ಜಿಯೊಂದಿಗೆ ಹೇಳ್ತಿರ್ತಾನೆ. ಇವನ ತಂದೆ ಒಂದು ದಿನ ದಿನಪತ್ರಿಕೆಯಲ್ಲಿ ಬಂದ ವರದಿಯನ್ನು ಓದುತ್ತಾ ಎಂಟು ವರ್ಷದ ಬಾಲಕನ ಧೈರ್ಯ ಮತ್ತು ಸಾಹಸದ ವಿಷಯ ಹೇಳಿ. ‘ನೀನು ನೋಡು ಯಾವಾಗಲೂ ಅಜ್ಜಿ ಜೊತೆ ಮಲಗೇ ಇರ್ತೀಯ ಅಂತ ಬೈದು ಆತನಿಗೆ ಒಂದು ಸಾವಾಲೊಡ್ಡಿ ಒಂದು ದಿನ ನನ್ನ ಕಚೇರಿಯಲ್ಲೇ ಮಲಗಬೇಕು ಅಂದಾಗ ಸ್ವಾಮಿ ಕೂಡಾ ರೋಷದಿಂದ ಸರಿ ಅಂತ ಒಪ್ಪಿಕೊಳ್ಳುತಾನೆ. ಇದೇ ವಿಷಯವನ್ನು ತನ್ನ ಗೆಳೆಯರಿಗೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತಾನೆ. ಆಗ ಆತನ ಗೆಳೆಯರು ‘ಅಲ್ಲಿ ಆಪೀಸಿನ ಹತ್ರ ದೆವ್ವ ಇದೆಯಂತೆ ಕಣೋ ಅಂತ ಹೆದರಿಸುತ್ತಾರೆ. ಈ ಭಯದಲ್ಲೇ ಸ್ವಾಮಿ ತನ್ನ ಅಪ್ಪನ ಆಪೀಸಿನಲ್ಲಿ ಮಲಗುತ್ತನೆ. ಮೊದಲೇ ಗೆಳೆಯರು ದೆವ್ವ ಎಂದೆಲ್ಲ ಹೆದರಿಸಿದ್ದಕ್ಕೆ ಹೆದರಿ ಒಂದು ಮೇಜಿನ ಕೆಳಗೆ ಅಡಗಿ ಕೂತಿರ್ತಾನೆ. ಇದೇ ವೇಳೆಗೆ ಕಳ್ಳನೊಬ್ಬ ಕಿಟಕಿಯ ಮೂಲಕ ಬರ್ತಾನೆ. ಸ್ವಾಮಿ ಭಯದಿಂದ ಹೆದರಿ ಆತನ ಕಾಲನ್ನು ಭಲವಾಗಿ ಕಚ್ಚುತಾನೆ. ಕಳ್ಳ ನೋವಿನಿಂದ ಚೀರಿಕೊಂಡಾಗ ಮನೆಯವರು ಮತ್ತು ಹತ್ತಿರದ ಜನರು ಬಂದು ಕಳ್ಳನನ್ನು ಪೊಲೀಸರಿಗೆ ಹಿಡಿದು ಕೊಡ್ತಾರೆ. ಪೊಲೀಸರು ಸ್ವಾಮಿಯನ್ನು ಅಭಿನಂದಿಸುತ್ತಾರೆ. ಇದು ‘ಮಾಲ್ಗುಡಿ ಟೈಮ್ಸ್ನಲ್ಲಿ ಪ್ರಕಟವಾಗುತ್ತದೆ. ಆದರೆ ಸ್ವಾಮಿಯ ಹೆದರಿಕೆ ಮಾತ್ರ ಕಡಿಮೆ ಆಗಲಿಲ್ಲ. ಮತ್ತೆ ತನ್ನ ಅಜ್ಜಿಯೊಡನೆ ಮಲಗೋಕೆ ಶುರು ಮಾಡ್ತಾನೆ. ಇಲ್ಲಿ ಈ ಎಪಿಸೋಡಿಗೆ ತೆರೆ ಬೀಳುತ್ತದೆ. ಹೀಗೆ ನೈಜ ಕಥೆಗಳನ್ನು ಹೊಂದಿರುವ ‘ಮಾಲ್ಗುಡಿ ಡೇಸ್ ಮನಸಿಗೆ ಮುದ ನೀಡುತ್ತದೆ. ಬಹಳ ದಿನಗಳ ನಂತರ ನೆನಪಾಯ್ತು.
ಇದರ ಇನ್ನು ಕೆಲವು ಎಪಿಸೋಡ್‌ಗಳನ್ನು ನೋಡಲು ಬಾಕಿ ಇದೆ. ಮತ್ತೊಮ್ಮೆ ನೋಡಿ ಬರ್ತೀನಿ. ನಿಮಗೂ ನೋಡಬೇಕಿನ್ನಿಸಿದರೆ ಮಾರುಕಟ್ಟೆಯಲ್ಲಿ ‘ಮಾಲ್ಗುಡಿ ಡೇಸ್ನ ಡಿವಿಡಿ ಸಿಗುತ್ತೆ ನೀವು ಮತ್ತೊಮ್ಮೆ ನೋಡಿ.
-ವೀರೇಶ ಹೊಗೆಸೊಪ್ಪಿನವರ
(ಮಾಹಿತಿ ನೀಡಿದ ಬ್ಲಾಗ್ ಹಾಗೂ ಅಂತರ್ಜಾಲ ಪ್ರಪಂಚಕ್ಕೆ ಧನ್ಯವಾದಗಳು)
2 comments:
veeresha, chennagide kano lekhana... hecchu hecchu bariyappa... :-)
thanks srinivas
Post a Comment